ಹೀಗೇಕೆ ನೆನಪಾಗಿ ಕಾಡುವೆ ಹೇಳು ನಂಗೆ
ಮಳೆ ನಿಂತರೂ ನಿಲ್ಲದ ಎಲೆಯ ಹನಿಯ ಹಾಗೆ
ಅಳು ನಿಂತರೂ ನಿಲ್ಲದ ಬಿಕ್ಕುಸಿರ ಹಾಗೆ
ಹಗಲು ಮನಸಿನ ಸುತ್ತ ನೀ ಸುಳಿದರೂ ನಾ ಸಹಿಸಿಲ್ಲವೇ ?
ಇರುಳು ಕನಸಲೂ ಬಂದು ಕಾಡುವುದು ;ನಿದ್ದೆಯೋಡಿಸುವುದು ತಪ್ಪಲ್ಲವೇ ?
ನಾ ಬಲ್ಲೆ; ನಿನ್ನ ಪ್ರೀತಿಯೊಂದು ತೀರ ಕಾಣದ ಸಾಗರ
ಅಲೆದಲೆದು ಸೋತೆ; ಈ ಪ್ರೀಥಿಯಾಲ ಇನ್ನೂ ಅಗೋಚರ
ನಿನ್ನ ಕಣ್ಣಲ್ಲಿ ನಾ ಕಂಡ ನನ್ನ ಕಣ್ಣ ಕಾಡಿಗೆ
ರೆಪ್ಪೆಯಿಕ್ಕುವುದೇ ಮರೆತೋಯ್ತು ,ನಿನ್ನ ನಗೆ ಮಿಂಚಿನ ಮೋಡಿಗೆ
ಮಾತು ನಿಂತ್ಹೊಯ್ತು;ಮೌನ ಮಾತಾಯ್ತು,ನಾ ಮರೆತೆ ನನ್ನ
ಆ ದಿನವೇ ನೀ ಬರೆದೆ ನನ್ನೊಡಲ ಈ ಮೌನಕೆ ಕವನ
ಸಾಕಿನ್ನು ಕಾಡಿ ನೋಡುವ ಕಣ್ಣ ಮುಚ್ಚಾಲೆ ಆಟ ;ನಾನೊಲ್ಲೆ
ನಿನ್ನೊಡಲ ತುಡಿತವನೋದಿ ತಿಳಿವುದ ನಾ ಬಲ್ಲೇ
ಬಣ್ಣ ಹಚ್ಚುವ ಮಾತಿಲ್ಲ ;ಈ ಮುಷ್ಟಿ ಹೃದಯ ನಿನಗಿದೋ ಮೀಸಲು
ನನ್ನೆಲ್ಲ ಭಾವಕ್ಕೆ ಬಣ್ಣ ಹಚ್ಚು;ನೀನಾಗುವೆಯಾ ಈ ಬಾಳ ಕಾಮನಬಿಲ್ಲು
--ಸುಮನ ಆಕಿರೆಕಾಡು